ಈ ಭಗವತಿ ದೇವಿಯು ಕರುಣಾಮಯಿ ದೇವಿ ಎಂದೆ ಪ್ರಸಿದ್ಧಳಾಗಿದ್ದಾಳೆ. ಕಲ್ಲೊಳಗಿರುವ ಈಕೆ ಕರುಣಾಮಯಿ ಆಗಿರುವುದಕ್ಕೂ ಕಾರಣ ಇಲ್ಲದಿಲ್ಲ. ಇಲ್ಲಿಗೆ ಭೇಟಿ ನೀಡುವ ಅಪಾರ ಸಂಖ್ಯೆಯ ಭಕ್ತರ ನಂಬಿಕೆಯಂತೆ ಈ ಭಗವತಿ ದೇವಿ ಬೇಡಿದ ಎಲ್ಲ ವರಗಳನ್ನು ಭಕ್ತರಿಗೆ ಅನುಗ್ರಹಿಸುತ್ತಾಳಂತೆ.
ಈ ಭಗವತಿ ದೇವಿಯ ದರ್ಶನ ಪಡೆದು ಯಾರೆ ಆಗಲಿ ಬರಿಗೈಯಿಂದ ಮರಳಲು ಸಾಧ್ಯವೆ ಇಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಈ ಶಕ್ತಿ ದೇವಿಯನ್ನು ಕರುಣಾಮಯಿ ಎಂದೆ ಜನರು ಕೊಂಡಾಡುತ್ತಾರೆ. ಇನ್ನೂ ಹೆಸರಿಗೆ ಸಂಬಂಧಿಸಿದಂತೆ ಈ ದೇವಿಯು ಅತಿ ಪ್ರಾಚೀನವಾದ ಬೃಹದಾಕಾರದ ಕಲ್ಲಿನಲ್ಲಿ ವಾಸವಾಗಿದ್ದಾಳೆ.
ಈ ಕ್ಷೇತ್ರಕ್ಕೆ ಸಂಬಂಧಿಸಿದ ದಂತಕಥೆಯಂತೆ, ಒಂದೊಮ್ಮೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರು ಕಾಡಿನಲ್ಲಿ ಅಲೆಯುತ್ತ ಒಣ ಕಟ್ಟಿಗೆ, ಹಣ್ಣು ಹಂಪಲಗಳನ್ನು ಹುಡುಕುತ್ತ ಜೀವನ ಸಾಗಿಸುತ್ತಿದ್ದರು. ಆದರೆ ಒಮ್ಮೆ ಬರಗಾಲದ ಸ್ಥಿತಿ ಎದುರಾಗಿ ಅವರಿಗೆ ತಿನ್ನಲು ಎನ್ನು ದಕ್ಕದಾಯಿತು.
ಹೀಗೊಂದು ದಿನ ಆ ಬುಡಕಟ್ಟು ಜನರು ಎಂದಿನಂತೆ ಕಾಡಿನಲ್ಲಿ ಕಟ್ಟಿಗೆಗಳನ್ನು ಹುಡುಕುತ್ತ ಅಲೆಯುತ್ತಿದ್ದಾಗ ದೈವ ಕಾಂತಿ ಹೊಂದಿದ್ದ ಒಬ್ಬ ಸ್ತ್ರೀಯು ಬೃಹದಾಕಾರದ ಬಂಡೆಗಲೊಂದಿಗೆ ನಿರಾಯಾಸವಾಗಿ ಆಡುತ್ತಿರುವುದನ್ನು ಗಮನಿಸಿದರು.
ಹಾಗೆ ಆ ಬುಡಕಟ್ಟು ಜನರು ಮುಂದೆ ಬರುತ್ತಿದ್ದಂತೆಯೆ ಆ ಸ್ತ್ರೀಯು ಒಂದು ಹೆಬ್ಬಂಡೆಯನ್ನು ಛಾವಣಿಯನ್ನಾಗಿ ಮಾಡಿಕೊಂಡು ಇನ್ನೊಂದು ಬಂಡೆಯನ್ನು ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡು ಅದರಲ್ಲಿ ಪ್ರವೇಶಿಸಿ ಬಿಟ್ಟಳು. ನಂತರ ಅವರಿಗೆ ತಾನು ಯಾರು ಎಂಬುದನ್ನು ಒಳಗಿನಿಂದಲೆ ಹೇಳಿ ಆಶೀರ್ವಾದಿಸಿದಳು.ಆ ಭಗವತಿ ದೇವಿಯು ತಾನು ಎಂದಿಗೂ ಇಲ್ಲಿಯೆ ವಾಸವಿರುವುದಾಗಿಯೂ, ತನ್ನನ್ನು ಅರಸಿಕೊಂಡು ಬರುವವರ ಸಕಲ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸುವುದಾಗಿಯೂ ಅಭಯ ನೀಡಿದಳು
ಇನ್ನೂ ಐತಿಹಾಸಿಕವಾಗಿ ಇಲ್ಲಿ ದೊರೆತಿರುವ ಕೆತ್ತನೆಗಳು ಹಾಗೂ ಇತಿಹಾಸಕಾರರ ಪ್ರಕಾರ ಹೇಳಬೇಕೆಂದರೆ ಇದು ಮೂರನೇಯ ಶತಮಾನಕ್ಕೆ ಸಂಬಂಧಿಸಿದ ಗುಹಾ ಬಂಡೆಯಾಗಿದೆ. ಜೈನ ಸನ್ಯಾಸಿಗಳು ಈ ಬಂಡೆಯ ರಚನೆಗಳನ್ನು ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ
ಇದಕ್ಕೆ ಪೂರಕವೆಂಬಂತೆ ಇಲ್ಲಿನ ಬಂಡೆಗಳ ಮೇಲೆ ಕೆತ್ತಲಾಗಿರುವ ಜೈನ ಪವಿತ್ರ 24 ತೀರ್ಥಂಕರರ ರಚನೆಗಳನ್ನು ಕಾಣಬಹುದು. ಅಲ್ಲದೆ ಜೈನರು ಇಲ್ಲಿ ಮುಖ್ಯ ದೇವಿಯಾಗಿ ಪದ್ಮಾವತಿಯನ್ನು ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ.
ಎರ್ನಾಕುಲಂ ಈ ದೇವಾಲಯವು ಎರ್ನಾಕುಲಂ ಜಿಲ್ಲೆಯ ಪೆರುಂಬವೂರು ಎಂಬಲ್ಲಿದ್ದು ಕಾಲಡಿ ಕ್ಷೇತ್ರದಿಂದ 22 ಕಿ.ಮೀ ಹಾಗೂ ಎರ್ನಾಕುಲಂ ನಗರದಿಂದ 53 ಕಿ.ಮೀ ಗಳಷ್ಟು ದೂರವಿದೆ. ತೆರಳಲು ಬಸ್ಸುಗಳು ಹಾಗೂ ಬಾಡಿಗೆ ಕಾರುಗಳು ದೊರೆಯುತ್ತವೆ. ಈ ದೇವಾಲಯವು 22 ಎಕರೆಗಳಷ್ಟು ವಿಸ್ತಾರವಾದ ದಟ್ಟಾರಣ್ಯದ ಮಧ್ಯದಲ್ಲಿ ಸ್ಥಿತವಿರುವುದು ವಿಶೇಷ. ಹಾಗಾಗಿ ಸುತ್ತಲೂ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸಬಹುದು.
No comments:
Post a Comment